ಗುಲಾಬ್ ಸಿಂಗ್
1792-1857. ಜಮ್ಮು ಮತ್ತು ಕಾಶ್ಮೀರ ಸಂಸ್ಥಾನದ ಒಬ್ಬ ಮಹಾರಾಜ. ಇವನ ತಂದೆ ಮಿಯಾನ್ ಕಿಶೋರ್‍ಸಿಂಗ್. ಲಾಹೋರಿಗೆ ಹೋಗಿ ಅಲ್ಲಿ ಪಂಜಾಬಿನ ಮಹಾರಾಜ ರಣಜಿತ್ ಸಿಂಗನ ಅಶ್ವದಳದಲ್ಲಿ ಉದ್ಯೋಗಕ್ಕೆ ಸೇರಿದ. ರಣಜಿತ ಇವನ ನಿಷ್ಠೆ, ದಕ್ಷತೆ, ಧೈರ್ಯ, ಸಾಹಸಗಳನ್ನು ಮೆಚ್ಚಿ ಇವನಿಗೆ ಜಮ್ಮುವನ್ನು ಬಹುಮಾನವಾಗಿ ಕೊಟ್ಟ. ಗುಲಾಬ್ ಸಿಂಗನ ಅಧಿಕಾರ ಕ್ರಮೇಣ ಲಡಾಖ್‍ಗೂ ವಿಸ್ತರಿಸಿತು. 1839ರಲ್ಲಿ ರಣಜಿತ್ ಸಿಂಗ್ ತೀರಿಕೊಂಡ ಮೇಲೆ ಇವನು ಖಾಲ್ಯದಲ್ಲಿ ತನ್ನ ಪ್ರಭಾವ ಬೆಳಸಿಕೊಂಡು ಅದರಲ್ಲಿ ಅಧಿಕಾರ ಗಳಿಸಿದ. ಬ್ರಿಟಿಷರಿಗೂ ಸಿಖ್ಖರಿಗೂ ನಡೆದ ಸೊಬ್ರಾಂವ್ ಕದನದಲ್ಲಿ (1846) ಗುಲಾಬ್ ಸಿಂಗನೂ ಪಾತ್ರ ವಹಿಸಿದ್ದ. ಆ ಕದನದಲ್ಲಿ ಇಂಗ್ಲಿಷರು ಜಯ ಗಳಿಸಿದರು. ಲಾಹೋರ್ ಅವರ ವಶವಾಯಿತು. ಬ್ರಿಟಿಷರೊಂದಿಗೆ ನಡೆದ ಸಂಧಾನದಲ್ಲಿ ಗುಲಾಬ್ ಸಿಂಗ್ ಪ್ರಧಾನ ಪಾತ್ರ ವಹಿಸಿದ. ಲಾಹೋರ್ ಕೌಲಿಗೆ ಸಹಿ ಬಿತ್ತು. ಇದರ ಪ್ರಕಾರ ಕಾಶ್ಮೀರವೂ ಅದರ ಅಧೀನ ರಾಜ್ಯಗಳೂ ಬ್ರಿಟಿಷರಿಗೆ ಸೇರಿದುವು. ಗುಲಾಬ್ ಸಿಂಗ್ ಕಾಶ್ಮೀರವನ್ನು 10,00,000 ಪೌಂ. ಗಳಿಗೆ ಅವರಿಂದ ಕೊಂಡ. ಇವನಿಗೆ ಮಹಾರಾಜ ಪದವಿ ಪ್ರಾಪ್ತವಾಯಿತು. ಬ್ರಿಟಿಷರೊಂದಿಗೆ ಈತ ಸ್ನೇಹ ಸಂಬಂಧ ಉಳಿಸಿಕೊಂಡಿದ್ದು, 1857ರಲ್ಲಿ ನಡೆದ ಬಂಡಾಯದಲ್ಲಿ ಬ್ರಿಟಿಷರಿಗೆ ನೆರವು ನೀಡಿದ. ಗುಲಾಬ್ ಸಿಂಗ್ ತೀರಿಕೊಂಡಿದ್ದು 1857ರಲ್ಲಿ. ಕಾಶ್ಮೀರ ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳುವವರೆಗೂ ಇವನ ವಂಶದವರು ಆ ಸಂಸ್ಥಾನವನ್ನಾಳಿದರು.							    (ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ